Source: 
Asianet News
https://kannada.asianetnews.com/politics/criminal-cases-against-candidates-bjp-96-congress-122-and-jds-candidates-70-cases-gvd-ru3zf4
Author: 
Kannadaprabha News
Date: 
04.05.2023
City: 
Bengaluru

ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ 581 (ಶೇ.22) ಮಂದಿ ಅಪರಾಧದ ಆರೋಪ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ 404 ಮಂದಿ ಗಂಭೀರ ಅಪರಾಧ ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆ ಹೇಳಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ 581 (ಶೇ.22) ಮಂದಿ ಅಪರಾಧದ ಆರೋಪ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ 404 ಮಂದಿ ಗಂಭೀರ ಅಪರಾಧ ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆ ಹೇಳಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಅಂಕಿ-ಅಂಶ ಬಿಡುಗಡೆ ಮಾಡಿದ ಎಡಿಆರ್‌ ಮುಖ್ಯಸ್ಥ ತ್ರಿಲೋಚನ ಶಾಸ್ತ್ರಿ, ಕಣದಲ್ಲಿರುವ 2613 ಅಭ್ಯರ್ಥಿಗಳ ಪೈಕಿ 2586 ಮಂದಿಯ ನಾಮಪತ್ರಗಳನ್ನು ಪರಿಶೀಲಿಸಿದ್ದೇವೆ. ಉಳಿದ ಅಭ್ಯರ್ಥಿಗಳ ನಾಮಪತ್ರದಲ್ಲಿ ಕೆಲವು ಅಂಶಗಳು ಅಸ್ಪಷ್ಟವಾಗಿದ್ದು, ವಿಶ್ಲೇಷಣೆಗೆ ಒಳಪಡಿಸಲು ಸಾಧ್ಯವಾಗಿಲ್ಲ ಎಂದರು.

ವಿಶೇಷವಾಗಿ ಬಿಜೆಪಿಯ 96 (ಒಟ್ಟು ಅಭ್ಯರ್ಥಿಗಳು 224), ಕಾಂಗ್ರೆಸ್ಸಿನ 122 (220) ಅಭ್ಯರ್ಥಿಗಳು ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ. ಜೆಡಿಎಸ್‌ 70 (208), ಆಮ್‌ ಆದ್ಮಿ ಪಕ್ಷ 48(208), ಎನ್‌ಸಿಪಿ 2(9), ಸಿಪಿಐ 1(3) ಹಾಗೂ 901 ಪಕ್ಷೇತರರ ಪೈಕಿ 119 ಸ್ಪರ್ಧಿಗಳ ವಿರುದ್ಧ ಪ್ರಕರಣ ದಾಖಲಾಗಿವೆ. ಇನ್ನು, ಬಿಜೆಪಿಯಿಂದ ಶೇ.43 (2018-ಶೇ.37), ಕಾಂಗ್ರೆಸ್‌ನಲ್ಲಿ ಶೇ.55 (2018-ಶೇ.55) ಹಾಗೂ ಜೆಡಿಎಸ್‌ನ ಶೇ.34 (2018-ಶೇ.21) ಅಭ್ಯರ್ಥಿಗಳು ಅಪರಾಧ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಇದರಲ್ಲಿ 49 ಅಭ್ಯರ್ಥಿಗಳ ವಿರುದ್ಧ ಮಹಿಳೆಯರಿಗೆ ಸಂಬಂಧಿಸಿದ ಅಪರಾಧ ಪ್ರಕರಣ ವಿಚಾರಣೆ ಹಂತದಲ್ಲಿವೆ. ಒಬ್ಬರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. 8 ಅಭ್ಯರ್ಥಿಗಳ ವಿರುದ್ಧ ಕೊಲೆ, 35 ಅಭ್ಯರ್ಥಿಗಳು ಕೊಲೆ ಯತ್ನ ಪ್ರಕರಣ ಎದುರಿಸುತ್ತಿರುವುದಾಗಿ ನಾಮಪತ್ರದಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಾರೆ 111 ಕ್ಷೇತ್ರದಲ್ಲಿ 3ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕ್ರಿಮಿನಲ್‌ ಮೊಕದ್ದಮೆ ಎದುರಿಸುತ್ತಿದ್ದು, ಅವನ್ನು ‘ರೆಡ್‌ ಅಲರ್ಚ್‌’ ಕ್ಷೇತ್ರಗಳೆಂದು ಪರಿಗಣಿಸಿದ್ದೇವೆ ಎಂದು ಶಾಸ್ತ್ರಿ ತಿಳಿಸಿದರು.

ಕೋಟ್ಯಧಿಪತಿಗಳು: ಬಿಜೆಪಿಯಿಂದ 216, ಕಾಂಗ್ರೆಸ್‌ 215, ಜೆಡಿಎಸ್‌ 170 ಹಾಗೂ ಆಪ್‌ನಿಂದ 107 ಕೋಟ್ಯಧಿಪತಿ ಸ್ಪರ್ಧಿಗಳು ಕಣದಲ್ಲಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿರುವವರಲ್ಲಿ 215 ಕೋಟ್ಯಧಿಪತಿಗಳಿದ್ದಾರೆ. ಒಟ್ಟಾರೆ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ .12.26 ಕೋಟಿ ಆಗುತ್ತದೆ ಎಂದು ತಿಳಿಸಿದರು. ಒಟ್ಟಾರೆ 60ಕ್ಕೂ ಹೆಚ್ಚಿನ ಅಭ್ಯರ್ಥಿಗಳು .100 ಕೋಟಿ ರು.ಗೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂದು ವಿಶ್ಲೇಷಿಸಿದ್ದೇವೆ ಎಂದರು.

ಮಹಿಳಾ ಅಭ್ಯರ್ಥಿಗಳ ಇಳಿಕೆ: 2023 ಚುನಾವಣೆಯಲ್ಲಿ ಶೇ.7ರಷ್ಟುಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 2018ಕ್ಕೆ ಹೋಲಿಸಿದರೆ ಚುನಾವಣೆಗೆ ಸ್ಪರ್ಧಿಸಿದ ಮಹಿಳೆಯರ ಪ್ರಮಾಣ ಶೇ.1ರಷ್ಟು ಇಳಿಕೆಯಾಗಿದೆ ಎಂದು ಹೇಳಿದರು.

ಶಿಕ್ಷಣ: ಇನ್ನು ಶೇ.48 ಅಭ್ಯರ್ಥಿಗಳು 5 ಹಾಗೂ 12ನೇ ತರಗತಿ ನಡುವೆ ಶಿಕ್ಷಣ ಪಡೆದಿದ್ದಾಗಿ ಘೋಷಿಸಿಕೊಂಡಿದ್ದಾರೆ. ಶೇ.43ರಷ್ಟು ಅಭ್ಯರ್ಥಿಗಳು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಇದೆಯೆಂದು ನಾಮಪತ್ರದಲ್ಲಿ ತಿಳಿಸಿದ್ದಾರೆ. ಒಬ್ಬರು ತಮ್ಮ ಶೈಕ್ಷಣಿಕ ಅರ್ಹತೆ ನೀಡಿಲ್ಲ ಎಂದು ತಿಳಿಸಿದರು.

ಯುವಕರು ಹೆಚ್ಚು: 832 ಅಭ್ಯರ್ಥಿಗಳು 25 ರಿಂದ 40 ವರ್ಷದೊಳಗಿನವರಾಗಿದ್ದರೆ, 1,356 ಅಭ್ಯರ್ಥಿಗಳು 41 ರಿಂದ 60 ವರ್ಷ ಎಂದು ಘೋಷಿಸಿಕೊಂಡಿದ್ದಾರೆ. 389 ಅಭ್ಯರ್ಥಿಗಳು 61 ರಿಂದ 80 ವರ್ಷದವರಾಗಿದ್ದಾರೆ. 9 ಅಭ್ಯರ್ಥಿಗಳು 80 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

© Association for Democratic Reforms
Privacy And Terms Of Use
Donation Payment Method