Skip to main content
Source
Varthabharati
https://www.varthabharati.in/article/national/357632
Date
City
Ahmedabad

 ಗುಜರಾತ್ ವಿಧಾನಸಭಾ ಚುನಾವಣೆ (Gujarat assembly election)ಯ ಮೊದಲ ಹಂತದ ಮತದಾನ ನಡೆಯುವ 89 ಕ್ಷೇತ್ರಗಳಿಗೆ ಸ್ಪರ್ಧಿಸಿರುವ 788 ಅಭ್ಯರ್ಥಿಗಳ ಪೈಕಿ ಪ್ರತಿ ಐವರಲ್ಲಿ ಒಬ್ಬರು ಅಪರಾಧ ಹಿನ್ನೆಲೆಯವರು ಎಂಬ ಅಂಶ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರೆಫಾರ್ಮ್ಸ್ (Association for Democratic Reforms-ADR) ನಡೆಸಿದ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂದು timesofindia.com ವರದಿ ಮಾಡಿದೆ.

ಮೊದಲ ಹಂತದ ಚುನಾವಣೆಗೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಶೇಕಡ 21ರಷ್ಟು ಮಂದಿ ಅಪರಾಧ ದಾಖಲೆಗಳು ಇರುವವರು. 2017ರ ಚುನಾವಣೆಯಲ್ಲಿ ಈ ಪ್ರಮಾಣ ಶೇಕಡ 15ರಷ್ಟಾಗಿತ್ತು. ಆಸಕ್ತಿದಾಯಕ ಅಂಶವೆಂದರೆ ಗಂಭೀರ ಅಪರಾಧ ಆರೋಪಗಳನ್ನು ಎದುರಿಸುತ್ತಿರುವವರ ಪ್ರಮಾಣ 2017ರಲ್ಲಿ ಇದ್ದ ಶೇಕಡ 8 ರಿಂದ ಈ ಬಾರಿ ಶೇಕಡ 13ಕ್ಕೇರಿದೆ. ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಹಲ್ಲೆ, ಕೊಲೆ, ಅಪಹರಣ ಮತ್ತು ಅತ್ಯಾಚಾರದಂಥ ಪ್ರಕರಣಗಳು ಇದರಲ್ಲಿ ಸೇರಿವೆ ಎಂದು ADR ನಡೆಸಿದ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ರಾಜಕೀಯ ಪಕ್ಷಗಳ ಪೈಕಿ ಆಮ್ ಆದ್ಮಿ ಪಾರ್ಟಿ ಗರಿಷ್ಠ ಸಂಖ್ಯೆಯ ಅಪರಾಧ ಹಿನ್ನೆಲೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. 88 ಅಭ್ಯರ್ಥಿಗಳ ಪೈಕಿ ಶೇಕಡ 36ರಷ್ಟು ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದರೆ ಶೇಕಡ 30ರಷ್ಟು ಮಂದಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಶೇಕಡ 35ರಷ್ಟು ಮಂದಿ ಅಪರಾಧ ಆರೋಪಿಗಳಾಗಿದ್ದು, ಶೇಕಡ 20ರಷ್ಟು ಮಂದಿ ಗಂಭೀರ ಆರೋಪ ಎದುರಿಸುತ್ತಿರುವವರು.

ಬಿಜೆಪಿಯ ಶೇಕಡ 16ರಷ್ಟು ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿರುವವರಾದರೆ, ಶೇಕಡ 12ರಷ್ಟು ಮಂದಿ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

2017ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶೇಕಡ 36ರಷ್ಟು, ಬಿಜೆಪಿಯ ಶೇಕಡ 25ರಷ್ಟು ಮತ್ತು ಆಮ್ ಆದ್ಮಿ ಪಾರ್ಟಿಯ ಶೇಕಡ 11ರಷ್ಟು ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದರು. ಈ ಬಗ್ಗೆ timesofindia.com ವರದಿ ಮಾಡಿದೆ.


abc