Skip to main content
Source
Prajavani
https://www.prajavani.net/news/india-news/hate-speech-mla-mps-booked-according-to-analysis-by-a-private-election-watchdog-2506188
Author
​ಪ್ರಜಾವಾಣಿ ವಾರ್ತೆ
Date

ದೇಶದ 4,768 ಸಂಸದರು ಮತ್ತು ಶಾಸಕರನ್ನು ಎಡಿಆರ್‌ ವಿಶ್ಲೇಷಣೆಗೊಳಪಡಿಸಿತ್ತು. ಒಟ್ಟು ಪ್ರಕರಣಗಳಲ್ಲಿ ಶೇ 40ರಷ್ಟು ಪ್ರಕರಣಗಳು ಬಿಜೆಪಿ ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಾಗಿವೆ ಎಂದು ಸಂಸ್ಥೆ ತಿಳಿಸಿದೆ.

ಕಾನೂನು ಆಯೋಗದ ಪ್ರಕಾರ, ಭಾರತೀಯ ದಂಡ ಸಂಹಿತೆಯ 124(ಎ), 153(ಎ), 153(ಬಿ), 295(ಎ), 298, 505(1) ಮತ್ತು 505(2) ಸೆಕ್ಷನ್‌ಗಳು ಮತ್ತು ಇತರ ಶಾಸನಗಳ ಸಂಬಂಧಪಟ್ಟ ಸೆಕ್ಷನ್‌ಗಳನ್ನು ದ್ವೇಷ ಭಾಷಣದ ಅಡಿ ಗುರುತಿಸಲಾಗುತ್ತದೆ. ಅಭ್ಯರ್ಥಿಗಳು ಘೋಷಿಸಿಕೊಂಡಿರುವ ಅಫಿಡವಿಟ್ಟುಗಳ ಆಧಾರದಲ್ಲಿ ಈ ವಿಶ್ಲೇಷಣೆ ನಡೆಸಲಾಗಿದೆ.

ಎಡಿಆರ್‌ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಬಿಜೆಪಿಯ 42 ಶಾಸಕರು/ ಸಂಸದರು, ಕಾಂಗ್ರೆಸ್‌ನ 15, ಎಎಪಿಯ ಏಳು, ಡಿಎಂಕೆ, ಸಮಾಜವಾದಿ ಪಕ್ಷ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ನಿಂದ ತಲಾ ಐವರು, ಆರ್‌ಜೆಡಿಯ ನಾಲ್ವರು ಜನಪ್ರತಿನಿಧಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಬಿಜೆಪಿ ಸಂಸದ ರಮೇಶ್‌ ಬಿಧೂಡಿ ಅವರು ಬಿಎಸ್‌ಪಿ ಸಂಸದ ಡ್ಯಾನಿಶ್‌ ಅಲಿ ಅವರ ವಿರುದ್ಧ ಲೋಕಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಬಿಧೂಡಿ ನಡೆಯನ್ನು ವಿರೋಧ ಪಕ್ಷಗಳು ಖಂಡಿಸಿದ್ದವು. ಇದಾದ ಕೆಲ ದಿನಗಳಲ್ಲೇ ಈ ವರದಿ ಹೊರಬಿದ್ದಿದೆ.

ಸಂಸರದ ಪಟ್ಟಿ: ರಾಜ್ಯದ ಏಳು ಸಂಸದರ ವಿರುದ್ಧ ದ್ವೇಷ ಭಾಷಣ ಪ್ರಕರಣಗಳು ದಾಖಲಾಗುವ ಮೂಲಕ ಉತ್ತರ ಪ್ರದೇಶವು ಸಂಸದರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು (4 ಸಂಸದರು), ಬಿಹಾರ, ಕರ್ನಾಟಕ ಮತ್ತು ತೆಲಂಗಾಣ (ತಲಾ 3), ಅಸ್ಸಾಂ, ಗುಜರಾತ್‌, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳ (ತಲಾ 2) ಜಾರ್ಖಂಡ್‌, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್‌ (ತಲಾ 1) ರಾಜ್ಯಗಳಿವೆ.

ಪಕ್ಷವಾರು ಪಟ್ಟಿಯಲ್ಲಿ, 22 ಸಂಸದರ ವಿರುದ್ಧ ದ್ವೇಷ ಭಾಷಣ ಪ್ರಕರಣಗಳು ದಾಖಲಾಗುವ ಮೂಲಕ ಬಿಜೆಪಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕಾಂಗ್ರೆಸ್‌ನ ಇಬ್ಬರು ಸಂಸದರು, ಎಎಪಿ, ಎಐಎಂಐಎಂ, ಎಐಯುಡಿಎಫ್‌, ಡಿಎಂಕೆ, ಎಂಡಿಎಂಕೆ, ಪಟ್ಟಲಿ ಮಕ್ಕಳ್‌ ಕಟ್ಚಿ, ಶಿವಸೇನಾ (ಉದ್ಧವ್‌ ಠಾಕ್ರೆ ಬಣ), ವಿಸಿಕೆಯ ತಲಾ ಒಬ್ಬರು ಸಂಸದರು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ವಿರುದ್ಧ ಈ ಪ್ರಕರಣಗಳು ದಾಖಲಾಗಿದೆ.

ಶಾಸಕರ ಪಟ್ಟಿ: ಶಾಸಕರ ಪಟ್ಟಿಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಮುಂದಿವೆ. ಈ ಎರಡು ರಾಜ್ಯಗಳ ತಲಾ ಒಂಬತ್ತು ಶಾಸಕರು ದ್ವೇಷ ಭಾಷಣ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಪಕ್ಷವಾರು ಪಟ್ಟಿಯಲ್ಲೂ ಬಿಜೆಪಿಯೇ ಮುಂದಿದೆ. ಬಿಜೆಪಿಯ 20 ಶಾಸಕರು, ಕಾಂಗ್ರೆಸ್‌ನ (13), ಎಎಪಿ (6), ಎಸ್‌ಪಿ ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ (ತಲಾ 5), ಡಿಎಂಕೆ ಮತ್ತು ಆರ್‌ಜೆಡಿ (ತಲಾ 4), ಟಿಎಂಸಿ ಮತ್ತು ಶಿವಸೇನಾ (ತಲಾ 3), ಎಐಎಂಐಎಂ, ಸಿಪಿಎಂ, ಎನ್‌ಸಿಪಿ, ಸುಹೇಲ್‌ದೇವ್‌ ಭಾರತೀಯ ಸಮಾಜ್‌ ಪಕ್ಷ, ಟಿಡಿಪಿ, ಟಿಪ್ರ ಮೋತ್ರ (ತಲಾ 1) ಶಾಸಕರು ಈ ಪ್ರಕರಣ ಎದುರಿಸುತ್ತಿದ್ದಾರೆ. 

ದ್ವೇಷ ಭಾಷಣ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಘೋಷಿಸಿಕೊಂಡಿರುವ 80 ಅಭ್ಯರ್ಥಿಗಳು ಕಳೆದ ಐದು ವರ್ಷಗಳಲ್ಲಿ ವಿಧಾನಸಭೆ, ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ ಎಂದು ವರದಿ ಹೇಳಿದೆ.