ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಹೆಚ್ಚಿನ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡ ಪ್ರಾದೇಶಿಕ ಪಕ್ಷ ಎನಿಸಿಕೊಂಡಿದೆ.
ನಂತರದ ಸ್ಥಾನದಲ್ಲಿ ತೆಲಂಗಾಣದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಇದೆ.
2020–21ನೇ ಸಾಲಿನಲ್ಲಿ ಎಸ್‌ಪಿ ₹561.46 ಕೋಟಿ ಮೌಲ್ಯದ ಆಸ್ತಿ ಘೋಷಿಸಿತ್ತು. ಅದು 2021–2022 ಸಾಲಿನಲ್ಲಿ ಶೇ 1.23 ರಷ್ಟು ಹೆಚ್ಚಳವಾಗಿದ್ದು ಸದ್ಯ ₹568.369 ಕೋಟಿಗೆ ಏರಿಕೆ ಕಂಡಿದೆ.
ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಬಿಆರ್‌ಎಸ್ 2020–21ನೇ ಸಾಲಿನಲ್ಲಿ ₹319.55 ಆಸ್ತಿ ಘೋಷಿಸಿತ್ತು. ಅದು 2021–22ನೇ ಸಾಲಿನಲ್ಲಿ ₹512.24 ಕೋಟಿಗೆ ಏರಿದೆ.
ಈ ಎರಡು ವರ್ಷಗಳ ನಡುವಿನ ಅವಧಿಯಲ್ಲಿ ಡಿಎಂಕೆ, ಬಿಜು ಜನತಾದಳ(ಬಿಜೆಡಿ) ಮತ್ತು ಸಂಯುಕ್ತ ಜನತಾದಳ(ಜೆಡಿಯು) ಆಸ್ತಿಯಲ್ಲಿ ಭಾರಿ ಏರಿಕೆ ಕಂಡಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ 2020–21ರ ವರ್ಷದಲ್ಲಿ ₹115.708 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿತ್ತು. ಅದು 2021–22ನೇ ವರ್ಷದಲ್ಲಿ ಶೇ 244.88 ರಷ್ಟು ಏರಿಕೆ ಕಂಡಿದ್ದು, ಸದ್ಯ ಡಿಎಂಕೆ ಬಳಿ ₹399 ಕೋಟಿ ಮೌಲ್ಯದ ಆಸ್ತಿ ಇದೆ.
ಬಿಜೆಡಿ 2020–21ನೇ ಸಾಲಿನಲ್ಲಿ ₹194 ಕೋಟಿ ಆಸ್ತಿ ತೋರಿಸಿತ್ತು. 2021–22ರಲ್ಲಿ ಶೇ 143 ರಷ್ಟು ಏರಿಕೆಯಾಗಿದ್ದು ₹474 ಕೋಟಿಯಷ್ಟು ಆಸ್ತಿ ಹೊಂದಿದೆ. ಇದೇ ಅವಧಿಯಲ್ಲಿ ಜೆಡಿಯುನ ಆಸ್ತಿ ಶೇ 95ರಷ್ಟು ಏರಿಕೆಯಾಗಿದ್ದು, ₹86 ಕೋಟಿಯಿಂದ ₹168 ಕೋಟಿಗೆ ಮುಟ್ಟಿದೆ.
ಆಮ್ ಆದ್ಮಿ ಪಕ್ಷ(ಎಎಪಿ)ದ ಆಸ್ತಿ 2020–21 ರಿಂದ 2021–22 ನಡುವಿನ ವರ್ಷಗಳಲ್ಲಿ ಶೇ 71.76ರಷ್ಟು ಏರಿಕೆಯಗಿದ್ದು ₹21.82 ಕೋಟಿಯಿಂದ ₹37.477 ಕೋಟಿಗೆ ತಲುಪಿದೆ
ದೇಶದ ಅಗ್ರ 10 ಪ್ರಾದೇಶಿಕ ಪಕ್ಷಗಳ ಸಾಲಿನಲ್ಲಿ ತಮಿಳುನಾಡಿನ ಎಐಎಡಿಎಂಕೆ ಮತ್ತು ಟಿಡಿಪಿಗಳ ಆಸ್ತಿಯಲ್ಲಿ ಮಾತ್ರ ಕುಸಿತ ಕಂಡಿವೆ. ಎರಡೂ ಪಕ್ಷಗಳು ಆಸ್ತಿಯಲ್ಲಿ ಕ್ರಮವಾಗಿ ಶೇ 1.55 ಮತ್ತು ಶೇ 3.04 ರಷ್ಟು ಇಳಿಕೆ ದಾಖಲಿಸಿವೆ.
ಎಐಎಡಿಎಂಕೆ ಆಸ್ತಿ ₹260.166 ಕೋಟಿಯಿಂದ ₹256.13 ಕೋಟಿಗೆ ಇಳಿದಿದೆ. ಟಿಡಿಪಿ ಆಸ್ತಿಯು ₹133.423 ಕೋಟಿಯಿಂದ ₹129.372 ಕೋಟಿಗೆ ಕುಸಿದಿದೆ ಎನ್ನುತ್ತಿದೆ ಎಡಿಆರ್ ವರದಿ.