Skip to main content
Source
Vijaykarnataka
https://vijaykarnataka.com/?back=1
Date
City
Bengaluru

Karnataka DK Shivakumar Richest MLA: ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೇಶದ ಅತಿ ಶ್ರೀಮಂತ ಶಾಸಕರೆನಿಸಿದ್ದಾರೆ. ಎನ್ಇಡಬ್ಲ್ಯೂ ಹಾಗೂ ಎಡಿಆರ್ ಸಂಸ್ಥೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಅಧ್ಯಯನ ವರದಿಯೊಂದರಲ್ಲಿ ಈ ವಿಚಾರವನ್ನು ಉಲ್ಲೇಖಿಸಲಾಗಿದೆ. ಡಿಕೆಶಿ ಅವರ ಒಟ್ಟಾರೆ ಆಸ್ತಿ ಮೌಲ್ಯ 1,413 ಕೋಟಿ ರೂ.ಗಳಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದಲ್ಲದೆ, ದೇಶದ ಟಾಪ್ 3 ಶ್ರೀಮಂತ ಶಾಸಕರ ಸ್ಥಾನಗಳೂ ಕರ್ನಾಟಕಕ್ಕೇ ಒಲಿದಿವೆ! ಅಷ್ಟೇ ಅಲ್ಲ, ಟಾಪ್ 20 ಶ್ರೀಮಂತ ಶಾಸಕರ ಪಟ್ಟಿಯಲ್ಲಿ 12 ಶಾಸಕರು ಕರ್ನಾಟಕದವೇ ಆಗಿದ್ದಾರೆ.

ಹೈಲೈಟ್ಸ್‌:

  • ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೇಶದ ನಂಬರ್ 1 ಶ್ರೀಮಂತ ಶಾಸಕ.
  • ಎಡಿಆರ್ - ಎನ್ ಇ ಡಬ್ಲ್ಯೂ ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಉಲ್ಲೇಖ.
  • ಟಾಪ್ 3 ಸ್ಥಾನಗಳಲ್ಲಿ ಪ್ರಿಯಾ ಕೃಷ್ಣ ಟಾಪ್ 2, ಎಚ್ ಕೆ ಪುಟ್ಟಸ್ವಾಮಿ ಗೌಡ.
  • ಟಾಪ್ 20ರ ಸ್ಥಾನಗಳಲ್ಲಿ 12 ಮಂದಿ ಕರ್ನಾಟಕದ ಶಾಸಕರೇ!

ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಭಾರತದ ಅತ್ಯಂತ ಶ್ರೀಮಂತ ಶಾಸಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಸೋಸಿಯೇಷನ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲ್ಯೂ) ಸಂಸ್ಥೆಗಳು ನಡೆಸಿರುವ ಅಧ್ಯಯನ ವರದಿಗಳಲ್ಲಿ ಈ ವಿಚಾರವನ್ನು ಉಲ್ಲೇಖಿಸಿವೆ. ಡಿ.ಕೆ. ಶಿವಕುಮಾರ್ ಅವರ ಒಟ್ಟಾರೆ ಆಸ್ತಿ ಮೊತ್ತ 1,413 ಕೋಟಿ ರೂ.ಗಳಾಗಿದ್ದು, ಅವರಿಗೆ ದೇಶದ ಸಿರಿವಂತ ಶಾಸಕರೆಂಬ ಹೆಗ್ಗಳಿಕೆಯನ್ನು ತಂದಿತ್ತಿದೆ.

ಅಷ್ಟೇ ಅಲ್ಲ, ಭಾರತದ ಟಾಪ್ 3 ಸಿರಿವಂತ ಶಾಸಕರ ಪಟ್ಟಿಯಲ್ಲಿಯೂ ರಾಜ್ಯದ ಶಾಸಕರೇ ಇದ್ದು, ಸಂಸ್ಥೆಗಳು ಬಿಡುಗಡೆ ಮಾಡಿರುವ ದೇಶದ ಸಿರಿವಂತ ಶಾಸಕರ ಪಟ್ಟಿಯ ಟಾಪ್ 20ರಲ್ಲಿ 12 ಮಂದಿ ಶಾಸಕರು ರಾಜ್ಯದವರೇ ಆಗಿರುವುದು ಗಮನಾರ್ಹ.

ಈ ವರ್ಷ ನಡೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ರಾಜಕಾರಣಿಗಳು ಸಲ್ಲಿಸಿದ್ದ ಆಸ್ತಿ ವಿವರಗಳನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ಅಧ್ಯಯನ ವರದಿಯ ಪ್ರಕಾರ, ರಾಜ್ಯದ ಒಟ್ಟಾರೆ ಶಾಸಕರ ಪೈಕಿ ಶೇ. 14ರಷ್ಟು ಶಾಸಕರು ಶತಕೋಟಿ ಒಡೆಯರು. ಭಾರತದ ಯಾವುದೇ ಒಂದು ರಾಜ್ಯದಲ್ಲಿ ಹೀಗೆ ಶೇಕರಾವಾರು ಲೆಕ್ಕಾಚಾರದಲ್ಲಿ ಅತಿ ಹೆಚ್ಚು ಶತಕೋಟಿ ಒಡೆಯರು ಇರುವುದು ಕರ್ನಾಟಕದಲ್ಲೇ ಎಂದು ಎಡಿಆರ್ ವರದಿ ಹೇಳಿದೆ. ಭಾರತದ ಒಟ್ಟಾರೆ ಶಾಸಕರ ಆಸ್ತಿ ಮೌಲ್ಯಗಳನ್ನು ಲೆಕ್ಕ ಹಾಕಿದರೆ ಸರಾಸರಿಯಾಗಿ ಪ್ರತಿಯೊಬ್ಬ ಶಾಸಕನು 64.3 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟಾಪ್ 3ರಲ್ಲಿರುವ ಕರ್ನಾಟಕ ಶಾಸಕರು

ಎಡಿಆರ್ ಬಿಡುಗಡೆ ಮಾಡಿರುವ ವರದಿಯಲ್ಲಿ ಟಾಪ್ 3ರಲ್ಲಿ ರಾಜ್ಯದ ಶಾಸಕರೇ ಇದ್ದಾರೆ. ಟಾಪ್ 1ರಲ್ಲಿ ಡಿ.ಕೆ. ಶಿವಕುಮಾರ್ ಇದ್ದರೆ, ಟಾಪ್ 2ರಲ್ಲಿ ಗೌರಿ ಬಿದನೂರು ಶಾಸಕ ಎಚ್. ಕೆ. ಪುಟ್ಟಸ್ವಾಮಿ ಗೌಡ ಇದ್ದಾರೆ. ಇವರ ಆಸ್ತಿ ಮೌಲ್ಯ 1,267 ಕೋಟಿ ರೂ.ಗಳಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮೂರನೇ ಸ್ಥಾನದಲ್ಲಿ ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಶಾಸಕ ಪ್ರಿಯಾ ಕೃಷ್ಣ ಅವರಿದ್ದು ಅವರ ಒಟ್ಟಾರೆ ಆಸ್ತಿ ಮೌಲ್ಯ 1,156 ಕೋಟಿ ರೂ. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಟಾಪ್ 20ರಲ್ಲಿ ಇರುವ ಕರ್ನಾಟಕದ ಶಾಸಕರು

ಟಾಪ್ 20 ಸಿರಿವಂತ ಶಾಸಕರ ಪಟ್ಟಿಯ ಟಾಪ್ 1, 2, 3ರಲ್ಲಿ ಕ್ರಮವಾಗಿ ಡಿ.ಕೆ. ಶಿವಕುಮಾರ್, ಪುಟ್ಟಸ್ವಾಮಿ ಗೌಡ ಹಾಗೂ ಪ್ರಿಯಾ ಕೃಷ್ಣ ಇದ್ದಾರೆ. ಟಾಪ್ 20ರಲ್ಲಿ ಇರುವ ಉಳಿದ ಶಾಸಕರೆಂದರೆ, ಬಿ ಎಸ್ ಸುರೇಶ್ (ಹೆಬ್ಬಾಳ ಕಾಂಗ್ರೆಸ್ ಶಾಸಕ - 648 ಕೋಟಿ ರೂ. ಆಸ್ತಿ), ಎನ್.ಎ. ಹ್ಯಾರಿಸ್ (ಶಾಂತಿ ನಗರ ಕಾಂಗ್ರೆಸ್ ಶಾಸಕ - 439 ಕೋಟಿ ರೂ.), ಎಚ್.ಕೆ. ಸುರೇಶ್ (ಬೇಲೂರು ಬಿಜೆಪಿ ಶಾಸಕ - 435 ಕೋಟಿ ರೂ. ಆಸ್ತಿ), ಆರ್. ವಿ. ದೇಶಪಾಂಡೆ (ಹಳಿಯಾಳ ಕಾಂಗ್ರೆಸ್ ಶಾಸಕ - 363 ಕೋಟಿ ರೂ.), ಎಂ.ಆರ್. ಮಂಜುನಾಥ್ (ಹನೂರು ಜೆಡಿಎಸ್ ಶಾಸಕ - 316 ಕೋಟಿ ರೂ.), ಎಸ್.ಎನ್. ಸುಬ್ಬಾರೆಡ್ಡಿ (ಬಾಗೇಪಲ್ಲಿ ಕಾಂಗ್ರೆಸ್ ಶಾಸಕ - 313 ಕೋಟಿ ರೂ.), ಶ್ಯಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ - 312 ಕೋಟಿ ರೂ.), ಎಂ. ಕೃಷ್ಣಪ್ಪ (ಬೆಂಗಳೂರಿನ ವಿಜಯ ನಗರ ಕಾಂಗ್ರೆಸ್ ಶಾಸಕ - 296 ಕೋಟಿ ರೂ.), ಮುನಿರತ್ನ (ರಾಜರಾಜೇಶ್ವರಿ ಬಿಜೆಪಿ ಶಾಸಕ - 293 ಕೋಟಿ ರೂ.).