ಕರ್ನಾಟಕ ವಿದಾನ ಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಅತಿ ಶ್ರೀಮಂತರಾರು, ಶೂನ್ಯ ಆಸ್ತಿ ಹೊಂದಿದವರಾರು ಎಂಬ ಬಗ್ಗೆ ಎಡಿಆರ್ ವರದಿ ಸಿದ್ಧಪಡಿಸಿದೆ. ವರದಿಯಲ್ಲಿನ ಮಾಹಿತಿಯ ಬಗೆಗಿನ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಎಲ್ಲ ಪಕ್ಷಗಳಿಂದ ಅಥವಾ ಪಕ್ಷೇತರರಾಗಿ ಒಟ್ಟು 2615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ಗಳನ್ನು ದೆಹಲಿಯ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆಯು ಪರಿಶೀಲನೆಗೆ ಒಳಪಡಿಸಿದೆ. ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ, ಹಣಕಾಸು ಹಿನ್ನೆಲೆ, ಅವರ ಶೈಕ್ಷಣಿಕ ಅರ್ಹತೆ ಹೀಗೆ ಹಲವಾರು ಮಾಹಿತಿಗಳನ್ನು ಕ್ರೋಢೀಕರಿಸಿ ಎಡಿಆರ್ ವರದಿಯೊಂದನ್ನು ತಯಾರಿಸಿದೆ. ಈ ವರದಿಯ ಪ್ರಕಾರ ರಾಜ್ಯದಲ್ಲಿ ಚುನಾವಣಾ ಕಣದಲ್ಲಿರುವ ವಿವಿಧ ಪಕ್ಷಗಳ ಅಥವಾ ಪಕ್ಷೇತರರಾಗಿರುವ ಅಭ್ಯರ್ಥಿಗಳ ಅತ್ಯಂತ ಸಿರಿವಂತ ಅಭ್ಯರ್ಥಿ ಯಾರು, ಶೂನ್ಯ ಆಸ್ತಿ ಹೊಂದಿರುವವರು ಯಾರು, ಅತಿ ಹೆಚ್ಚು ಸಾಲ ಮಾಡಿಕೊಂಡವರು ಯಾರು ಈ ಎಲ್ಲ ವಿಷಯಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಎಷ್ಟು ಅಭ್ಯರ್ಥಿಗಳ ಬಳಿ ಎಷ್ಟು ಪ್ರಮಾಣದ ಸಂಪತ್ತಿದೆ? : 5 ಕೋಟಿ ಅಥವಾ ಅದಕ್ಕೂ ಹೆಚ್ಚು ಸಂಪತ್ತು ಹೊಂದಿರುವವವರ ಸಂಖ್ಯೆ 592 (ಶೇ 23), 2 ಕೋಟಿಯಿಂದ 5 ಕೋಟಿಯವರೆಗೆ ಸಂಪತ್ತು ಹೊಂದಿರುವವರ ಸಂಖ್ಯೆ 272 (ಶೇ 11), 50 ಲಕ್ಷದಿಂದ 2 ಕೋಟಿ ಮೌಲ್ಯದ ಸಂಪತ್ತು ಹೊಂದಿರುವವರ ಸಂಖ್ಯೆ 493 (ಶೇ 19), 10 ಲಕ್ಷದಿಂದ 50 ಲಕ್ಷ ಮೌಲ್ಯದ ಸಂಪತ್ತು ಹೊಂದಿರುವವರ ಸಂಖ್ಯೆ 578 (ಶೇ 22) ಹಾಗೂ 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ಸಂಪತ್ತು ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ 651 (ಶೇ 25) ಆಗಿದೆ.
ಕೋಟಿವೀರ ಅಭ್ಯರ್ಥಿಗಳು : ಎಡಿಆರ್ ಪರಿಶೀಲನೆಗೆ ಒಳಪಡಿಸಿದ 2586 ಅಭ್ಯರ್ಥಿಗಳ ಪೈಕಿ 1087 (ಶೇ42) ಅಭ್ಯರ್ಥಿಗಳು ಕರೋಡಪತಿಗಳಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಆಗ 2560 ಅಭ್ಯರ್ಥಿಗಳ ಪೈಕಿ 883 (ಶೇ 35) ಜನ ಕರೋಡಪತಿಗಳಾಗಿದ್ದರು.
ಪಕ್ಷವಾರು ಕರೋಡಪತಿ ಅಭ್ಯರ್ಥಿಗಳ ಮಾಹಿತಿ: ಎಡಿಆರ್ ಪರಿಶೀಲನೆ ಮಾಡಿದ ಕಾಂಗ್ರೆಸ್ನ 221 ರಲ್ಲಿ 215 (ಶೇ 97), ಬಿಜೆಪಿಯ 224 ರಲ್ಲಿ 216 (ಶೇ 96), ಜೆಡಿಎಸ್ನ 208ಲ್ಲಿ 170 (ಶೇ 82) ಹಾಗೂ ಆಪ್ನ 208 ರಲ್ಲಿ 107 (ಶೇ 51) ರಷ್ಟು ಅಭ್ಯರ್ಥಿಗಳು 1 ಕೋಟಿ ಅಥವಾ ಅದಕ್ಕೂ ಹೆಚ್ಚಿನ ಆಸ್ತಿ ಹೊಂದಿದ್ದಾರೆ.
ಅತ್ಯಧಿಕ ಶ್ರೀಮಂತ ಅಭ್ಯರ್ಥಿಗಳಿವರು : ತಾವೇ ಘೋಷಿಸಿದ ಅಫಿಡವಿಟ್ ಪ್ರಕಾರ ರಾಜ್ಯ ವಿದಾನಸಭಾ ಚುನಾವಣೆಯ ಕಣದಲ್ಲಿರುವ ಅತಿ ಶ್ರೀಮಂತ ಮೂವರು ಅಭ್ಯರ್ಥಿಗಳು ಇವರು:
1) ಬಿಬಿಎಂಪಿ ಸೆಂಟ್ರಲ್ ವ್ಯಾಪ್ತಿಯ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಯುಸೂಫ್ ಶರೀಫ್ (ಕೆಜಿಎಫ್ ಬಾಬು) ಇವರು ಘೋಷಿಸಿಕೊಂಡಿರುವ ಆಸ್ತಿ 1633 ಕೋಟಿ ರೂಪಾಯಿ.
2) ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎನ್ ನಾಗರಾಜು ಇವರು ಘೋಷಿಸಿಕೊಂಡಿರುವ ಆಸ್ತಿ 1609 ಕೋಟಿ ರೂಪಾಯಿ.
3) ರಾಮನಗರ ಜಿಲ್ಲೆ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿಕೆ ಶಿವಕುಮಾರ್ ಇವರು ಘೋಷಿಸಿಕೊಂಡಿರುವ ಆಸ್ತಿ 1413 ಕೋಟಿ ರೂಪಾಯಿ.
ಶೂನ್ಯ ಆಸ್ತಿ ಅಥವಾ ತಮ್ಮ ಬಳಿ ಯಾವುದೇ ಆಸ್ತಿ ಇಲ್ಲ ಎಂದವರು: ಈ ಬಾರಿಯ ಚುನಾವವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ 14 ಜನ ತಮ್ಮ ಬಳಿ ಯಾವುದೇ ಆಸ್ತಿ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ.
ಶೂನ್ಯ ಆಸ್ತಿಯ 14 ಅಭ್ಯರ್ಥಿಗಳ ವಿವರ: ವಿಜಯಪುರ ಜಿಲ್ಲೆ ನಾಗಠಾಣ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣಾ ಜಿ ಕಟಕದೊಂಡ, ಗುಲಬರ್ಗಾ ಜಿಲ್ಲೆ ಗುಲಬರ್ಗಾ ಗ್ರಾಮಾಂತರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ದತ್ತಾತ್ರೆಯ ಕೆ ಕಮಲಾಪುರಕರ, ಬೀದರ್ ಜಿಲ್ಲೆ ಔರಾದ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಂತೋಷಕುಮಾರ್, ಧಾರವಾಡ ಜಿಲ್ಲೆ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕಲಾಲ ಟಾಕಪ್ಪಾ ಸನ್ ಆಫ್ ಯಲ್ಲಪ್ಪ, ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್ ಓ ರಂಗಸ್ವಾಮಿ, ತುಮಕೂರು ಜಿಲ್ಲೆ ತುಮಕೂರು ಸಿಟಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ಆರ್ ಎ, ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಶಿವಣ್ಣ, ತುಮಕೂರು ಜಿಲ್ಲೆ ಪಾವಗಡ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾಗರಾಜಪ್ಪ, ಕೋಲಾರ ಜಿಲ್ಲೆ ಕೋಲಾರ ಗೋಲ್ಡ್ ಫೀಲ್ಡ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿ ಕಲಾವತಿ, ರಾಮನಗರ ಜಿಲ್ಲೆ ಮಾಗಡಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಮಂಜುನಾಥ ಕೆ ಆರ್.
            
    