Source: 
ETV Bharat Kannada
https://www.etvbharat.com/kannada/karnataka/bharat/107-sitting-mps-mlas-have-hate-speech-cases-against-them-most-from-bjp-adr-report/ka20231003211349736736829
Author: 
ETV Bharat Karnataka Desk
Date: 
03.10.2023
City: 

ಎಡಿಆರ್​ ದ್ವೇಷ ಭಾಷಣ ಕುರಿತ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಹಾಲಿ ಇರುವ 107 ಜನಪ್ರತಿನಿಧಿಗಳ ಮೇಲೆ ಗಂಭೀರ ಸ್ವರೂಪದ ಕೇಸ್​ ಹಾಕಲಾಗಿದೆ. ಇದರಲ್ಲಿ ಬಿಜೆಪಿಗರೇ ಮುಂದಿದ್ದಾರೆ ಎಂಬ ಅಂಶವಿದೆ.

ಕಳೆದ ಕಳೆದ 5 ವರ್ಷಗಳಲ್ಲಿ ವಿವಿಧ ಚುನಾವಣೆಯಲ್ಲಿ ಸ್ಪರ್ಧಿಸಿದ 480 ಅಭ್ಯರ್ಥಿಗಳ ವಿರುದ್ಧ ದ್ವೇಷ ಭಾಷಣದ ಕೇಸ್​ ಹಾಕಲಾಗಿದೆ. ಅದರಲ್ಲಿ ಹಾಲಿ ಇರುವ 107 ಶಾಸಕ, ಸಂಸದರ ಮೇಲೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುವ ಪ್ರಚೋದನಕಾರಿ, ದ್ವೇಷ ಭಾಷಣ ಮಾಡಿದ ಪ್ರಕರಣ ಇದೆ. ಜೊತೆಗೆ ಇದರಲ್ಲಿ ಬಿಜೆಪಿ ಜನಪ್ರತಿನಿಧಿಗಳೇ ಹೆಚ್ಚು ಎಂಬುದು ಗಮನಾರ್ಹ ಅಂಶವಾಗಿದೆ.

ಈ ಬಗ್ಗೆ ದೆಹಲಿ ಮೂಲದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR), ನ್ಯಾಷನಲ್​ ಎಲೆಕ್ಷನ್​ ವಾಚ್​ (NEW) ನಡೆಸಿದ ವಿಶ್ಲೇಷಣೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಶಾಸಕರು, ಸಂಸದರು ಕಳೆದ ಚುನಾವಣೆಯಲ್ಲಿ ಅಫಿಡವಿಟ್​ನಲ್ಲಿ ನೀಡಿದ ಮಾಹಿತಿಯ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ. 107 ಹಾಲಿ ಶಾಸಕರು ಮತ್ತು ಸಂಸದರ ಮೇಲೆಯೇ ದ್ವೇಷ ಭಾಷಣದಂತಹ ಗಂಭೀರ ಸ್ವರೂಪದ ಪ್ರಕರಣ ದಾಖಲಾಗಿವೆ. ಇದರಲ್ಲಿ 33 ಸಂಸದರಿದ್ದರೆ, 74 ಶಾಸಕರಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯವಾರು ಉತ್ತರಪ್ರದೇಶ ಮೊದಲು: ದ್ವೇಷ ಭಾಷಣ ಮಾಡಿದ ರಾಜಕಾರಣಿಗಳ ಪೈಕಿ ರಾಜ್ಯವಾರು ಲೆಕ್ಕ ಹಾಕಿದಲ್ಲಿ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಆ ರಾಜ್ಯದ 16 ಶಾಸಕರು, ಸಂಸದರ ಮೇಲೆ ಕೇಸ್​ ಇದೆ. ಬಿಹಾರದಲ್ಲಿ 12, ತಮಿಳುನಾಡು ಮತ್ತು ತೆಲಂಗಾಣದಲ್ಲಿ 9 ಕೇಸ್​ ಇವೆ. ಬಿಹಾರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ತಲಾ ಮೂರು, ಅಸ್ಸಾಂ, ಗುಜರಾತ್, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಇಬ್ಬರು, ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ ಮತ್ತು ಪಂಜಾಬ್‌ನಲ್ಲಿ ತಲಾ ಒಬ್ಬ ಜನಪ್ರತಿನಿಧಿಯ ಮೇಲೆ ಕೇಸ್​ ಇದೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯ ವಿಧಾನಸಭೆಗಳು, ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ, ಸೋತ 4768 ಅಭ್ಯರ್ಥಿಗಳ ಪೈಕಿ 480 ಮಂದಿಯ ಮೇಲೆ ದ್ವೇಷ ಭಾಷಣ ಮಾಡಿದ ಕೇಸ್​ ಇದೆ ಎಂದು ಅಫಿಡವಿಟ್​ನಲ್ಲಿ ನಮೂದಿಸಲಾಗಿದೆ ಎಂದು ಎಡಿಆರ್ ವರದಿಯಲ್ಲಿದೆ.

ಬಿಜೆಪಿ ಅಭ್ಯರ್ಥಿಗಳೇ ಹೆಚ್ಚು: ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿರುವ ರಾಜಕೀಯ ಪಕ್ಷಗಳ ಪೈಕಿ ಬಿಜೆಪಿ ಮುಂದಿದೆ. 42 ಜನಪ್ರತಿನಿಧಿಗಳ ಮೇಲೆ ಕೇಸ್​​ ಇದೆ. ಬಳಿಕ ಕಾಂಗ್ರೆಸ್​ 15, ಆಪ್​ 7, ಡಿಎಂಕೆ, ಸಮಾಜವಾದಿ ಮತ್ತು ವೈಎಸ್​ಆರ್​ ಕಾಂಗ್ರೆಸ್​ ವಿರುದ್ಧ 5, ಆರ್​ಜೆಡಿ ಪಕ್ಷದ ಮೇಲೆ 4 ಕೇಸ್​ಗಳಿವೆ.

ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸೆಕ್ಷನ್ 124(A), 153(A), 152(B), 298, 295(A), 505(2) ಮತ್ತು 505(1) ಪ್ರಕಾರ ಕೇಸ್​ ಹಾಕಲಾಗಿದೆ. ಎಡಿಆರ್ ಪಟ್ಟಿಯಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಹ್ಲಾದ್ ಜೋಶಿ, ಗಿರಿರಾಜ್ ಸಿಂಗ್, ರಾಘವ್ ಚಂದಾ, ಶಶಿ ತರೂರ್, ಕನಿಮೋಳಿ, ಸಂಜಯ್ ರಾವುತ್, ಅಸಾದುದ್ದೀನ್ ಓವೈಸಿ, ದಿಲೀಪ್ ಘೋಷ್, ನಿಶಿಕಾಂತ್ ದುಬೆ ಮತ್ತಿತರರ ಹೆಸರುಗಳಿವೆ. ಶಾಸಕರ ಪಟ್ಟಿಯಲ್ಲಿ ಪ್ರಮುಖವಾಗಿ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್, ತೇಜಸ್ವಿ ಯಾದವ್, ಬಾಬುಲ್ ಸುಪ್ರಿಯೊ ಮತ್ತು ಇತರರು ಇದ್ದಾರೆ.

© Association for Democratic Reforms
Privacy And Terms Of Use
Donation Payment Method