Skip to main content
Source
Vartha Bharati
https://www.varthabharati.in/National/hate-speech-case-against-107-mps-mlas-adr-1966123
Author
ವಾರ್ತಾಭಾರತಿ
Date
City
New Delhi

ಒಟ್ಟು 107 ಸಂಸದರು ಹಾಗೂ ಶಾಸಕರ ವಿರುದ್ಧ ದ್ವೇಷ ಭಾಷಣದ ಪ್ರಕರಣಗಳು ಇವೆ. ದ್ವೇಷ ಭಾಷಣದ ಪ್ರಕರಣಗಳಿರುವ 480 ಅಭ್ಯರ್ಥಿಗಳು ಕಳೆದ ಐದು ವರ್ಷಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ಹೇಳಿದೆ.

ದೇಶದಲ್ಲಿ ಈ ಅವಧಿಯಲ್ಲಿ ನಡೆದ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಹೊರತಾಗಿ ಎಲ್ಲಾ ಹಾಲಿ ಸಂಸದರು ಹಾಗೂ ಶಾಸಕರ ಸಲ್ಲಿಸಿದ ಸ್ವಯಂ ಪ್ರಮಾಣಿತ ಪ್ರಮಾಣಪತ್ರ ಗಳನ್ನು ಎಡಿಆರ್ ಹಾಗೂ ನ್ಯಾಷನಲ್ ಇಲೆಕ್ಷನ್ ವಾಚ್ (ಎನ್ಇಡಬ್ಲು) ವಿಶ್ಲೇಷಣೆ ನಡೆಸಿದೆ. ಹಾಲಿ ಸಂಸದರು ಹಾಗೂ ಶಾಸಕರು ತಮ್ಮ ವಿರುದ್ಧದ ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಈ ವಿಶ್ಲೇಷಣೆ ಬಹಿರಂಗಗೊಳಿಸಿದೆ.

ಕಳೆದ ಚುನಾವಣೆಯ ಮುನ್ನ ಸಂಸದರು ಹಾಗೂ ಶಾಸಕರು ಸಲ್ಲಿಸಿದ ಪ್ರಮಾಣಪತ್ರವನ್ನು ಆಧಾರವಾಗಿರಿಸಿ ಈ ವಿಶ್ಲೇಷಣೆ ಮಾಡಲಾಗಿದೆ. ಈ ವಿಶ್ಲೇಷಣೆಯ ಪ್ರಕಾರ 33 ಸಂಸದರು ತಮ್ಮ ವಿರುದ್ಧದ ದ್ವೇಷ ಭಾಷಣಕ್ಕೆ ಸಂಬಂಧಿಸಿ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇವರಲ್ಲಿ ಉತ್ತರಪ್ರದೇಶ 7, ತಮಿಳುನಾಡಿನ 4, ಬಿಹಾರ, ಕರ್ನಾಟಕ, ತೆಲಂಗಾಣದ ತಲಾ 3, ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ಪಶ್ಚಿಮಬಂಗಾಳದ ತಲಾ 2, ಜಾರ್ಖಂಡ್, ಮಧ್ಯಪ್ರದೇಶ, ಕೇರಳ, ಒಡಿಶಾ, ಪಂಜಾಬ್ ನ ತಲಾ ಒಬ್ಬರು ಸಂಸದರು ಸೇರಿದ್ದಾರೆ.

ಕಳೆದ 5 ವರ್ಷಗಳಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿ ಪ್ರಕರಣವನ್ನು ಘೋಷಿಸಿಕೊಂಡಿರುವ 480 ಅಭ್ಯರ್ಥಿಗಳು ಲೋಕಸಭೆ, ರಾಜ್ಯಸಭೆ ಹಾಗೂ ವಿಧಾನ ಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ ಎಂದು ಎಡಿಆರ್ ತಿಳಿಸಿದೆ. ದ್ವೇಷ ಭಾಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿರುವ ಓರ್ವ ಪಕ್ಷೇತರ ಸಂಸದರಲ್ಲದೆ, ಬಿಜೆಪಿಯ 22, ಕಾಂಗ್ರೆಸಿನ ಇಬ್ಬರು, ಆಮ್ ಆದ್ಮಿ ಪಕ್ಷ (ಎಎಪಿ), ಎಐಎಂಐಎಂ, ಎಐಯುಡಿಎಫ್, ಡಿಎಂಕೆ, ಎಂಡಿಎಂಕೆ, ಪಿಎಂಕೆ, ಶಿವಸೇನೆ (ಉದ್ಧವ್ ಬಾಳಾ ಸಾಹೇಬ್ ಠಾಕ್ರೆ)ಯಿಂದ ತಲಾ ಒಬ್ಬರು ಸಂಸದರು ಇದ್ದಾರೆ. 74 ಶಾಸಕರು ತಮ್ಮ ವಿರುದ ದ್ವೇಷಣ ಭಾಷಣದ ಪ್ರಕರಣ ಇವೆ ಎಂದು ಘೋಷಿಸಿಕೊಂಡಿದ್ದಾರೆ.

ಇದರಲ್ಲಿ ಬಿಹಾರ, ಉತ್ತರಪ್ರದೇಶದ ತಲಾ 9, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣದ ತಲಾ 6, ಅಸ್ಸಾಂ, ತಮಿಳನಾಡಿನ ತಲಾ 5, ದಿಲ್ಲಿ, ಗುಜರಾತ್, ಪಶ್ಚಿಮಬಂಗಾಳದ ತಲಾ 4, ಜಾರ್ಖಂಡ್, ಉತ್ತರಾಖಂಡದ ತಲಾ 3, ಕರ್ನಾಟಕ, ಪಂಜಾಬ್, ರಾಜಸ್ಥಾನ, ತ್ರಿಪುರದ ತಲಾ 2, ಮಧ್ಯಪ್ರದೇಶ ಹಾಗೂ ಒಡಿಶಾದ ತಲಾ ಒಬ್ಬರು ಶಾಸಕರು ಇದ್ದಾರೆ. ಭಾಷಣದ ಪ್ರಕರಣ ಹೊಂದಿರುವ ಇಬ್ಬರು ಪಕ್ಷೇತರ ಶಾಸಕರಲ್ಲದೆ, ಬಿಜೆಪಿಯ 20, ಕಾಂಗ್ರೆಸ್ ನ 13, ಆಪ್ 6, ಎಸ್ಪಿ ಹಾಗೂ ವೈಎಸ್ಆರ್ಸಿಪಿಯ ತಲಾ 6, ಡಿಎಂಕೆ ಹಾಗೂ ಆರ್ಜೆಡಿಯ ತಲಾ 4, ಎಐಟಿಸಿ ಹಾಗೂ ಎಸ್ಎಚ್ಎಸ್ ನ ತಲಾ 3, ಎಐಯುಡಿಎಫ್ ನ 2, ಎಐಎಂಐಎಂ, ಸಿಪಿಐ (ಎಂ), ಎನ್ಸಿಪಿ, ಸುಹೇಲ್ದೇವ್ ಭಾರತೀಯ ಪಾರ್ಟಿ, ಟಿಡಿಪಿ, ತಿಪ್ರಾ ಮೋತಾ ಪಾರ್ಟಿ ಹಾಗೂ ಟಿಆರ್ ಎಸ್ ನ ತಲಾ ಒಬ್ಬರು ಶಾಸಕರು ಇದ್ದಾರೆ.