ನವದೆಹಲಿ: ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮೆನಕಾ ಗಾಂಧಿ ಸೇರಿದಂತೆ 2004ರಿಂದ ಲೋಕಸಭೆಗೆ ಆಯ್ಕೆಯಾದ 23 ಸಂಸದರ ಒಟ್ಟು ಆಸ್ತಿ ಪ್ರಮಾಣ ₹ 35.18 ಕೋಟಿಯಿಂದ ₹ 402.79 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಸರ್ಕಾರೇತರ ಸಂಸ್ಥೆ 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್' (ಎಡಿಆರ್) ಗುರುವಾರ ಬಿಡುಗಡೆ ಮಾಡಿರುವ ಈ ವರದಿ ಪ್ರಕಾರ, ಕರ್ನಾಟಕದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ (ವಿಜಯಪುರ) ಅವರ ಆಸ್ತಿಯಲ್ಲಿ ಗರಿಷ್ಠ ಅಂದರೆ ಶೇ 9,098 ರಷ್ಟು ಏರಿಕೆಯಾಗಿದೆ. ಅವರೇ ಘೋಷಿಸಿರುವ ಮಾಹಿತಿ ಪ್ರಕಾರ, 2004ರಲ್ಲಿ ₹ 54.8 ಲಕ್ಷದಷ್ಟಿದ್ದ ಆಸ್ತಿ ಪ್ರಮಾಣ, 2019ರ ಹೊತ್ತಿಗೆ ₹ 50.41 ಕೋಟಿಗೆ ಹೆಚ್ಚಳಗೊಂಡಿದೆ.
ಕರ್ನಾಟಕದ ಐವರು ಸಂಸದರು 2004ರಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಬೇರಾವ ರಾಜ್ಯದಲ್ಲೂ ಇಷ್ಟು ಸಂಸದರು 2004ರಿಂದ ಮರು ಆಯ್ಕೆಯಾಗಿಲ್ಲ. ದಾವಣಗೆರೆಯ ಜಿ.ಎಂ.ಸಿದ್ದೇಶ್ವರ ಅವರ ಆಸ್ತಿ ಪ್ರಮಾಣ ₹ 5.02 ಕೋಟಿಯಿಂದ ₹ 38.01 ಕೋಟಿಗೆ (ಶೇ 656) ಏರಿಕೆಯಾಗಿದೆ. ಇದೇ ವೇಳೆ ಡಿ.ವಿ.ಸದಾನಂದ ಗೌಡ ಅವರ ಆಸ್ತಿ ₹ 46.39 ಲಕ್ಷದಿಂದ ₹ 20.93 ಕೋಟಿಗೆ (ಶೇ 4,413) ಅಧಿಕಗೊಂಡಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ (ಧಾರವಾಡ) ಅವರ ಆಸ್ತಿ ₹ 77.60 ಲಕ್ಷದಿಂದ ₹ 11.13 ಕೋಟಿಗೆ (ಶೇ.1,335), ಅನಂತಕುಮಾರ್ ಹೆಗ್ಡೆ (ಉತ್ತರ ಕನ್ನಡ) ಅವರ ಆಸ್ತಿ ₹ 12.06 ಲಕ್ಷದಿಂದ ₹ 8.47 ಕೋಟಿಗೆ (ಶೇ 6,928) ಮತ್ತು ಪಿ.ಸಿ.ಗದ್ದಿಗೌಡರ (ಬಾಗಲಕೋಟೆ) ಅವರ ಆಸ್ತಿ ಮೊತ್ತ ₹ 53.75 ಲಕ್ಷದಿಂದ ₹ 4.39 ಕೋಟಿಗೆ (ಶೇ 718) ಏರಿದೆ.
2004ರಿಂದ ಮರು ಆಯ್ಕೆಯಾಗಿರುವ 23 ಸಂಸದರ ಪೈಕಿ 17 ಮಂದಿ ಬಿಜೆಪಿಯವರು. ಉಳಿದಂತೆ ಕಾಂಗ್ರೆಸ್‌ನ ಮೂವರು ಹಾಗೂ ಎಐಎಂಐಎಂ, ಶಿವಸೇನಾ ಮತ್ತು ಬಿಜೆಡಿಯ ತಲಾ ಒಬ್ಬರು ಇದ್ದಾರೆ. 2004ರಲ್ಲಿ ಈ ಸಂಸದರ ಸರಾಸರಿ ಆಸ್ತಿ ಮೊತ್ತ ₹ 1.52 ಕೋಟಿ ಇತ್ತು. ಅದು 2009ರ ವೇಳೆಗೆ ₹ 3.46 ಕೋಟಿ, 2014ರ ವೇಳೆಗೆ ₹ 9.85 ಕೋಟಿ ಮತ್ತು 2019ರ ವೇಳೆಗೆ ₹ 17.51 ಕೋಟಿಗೆ ಹೆಚ್ಚಾಗಿದೆ.
ಪ್ರತಿ ಚುನಾವಣೆ ಸಂದರ್ಭದಲ್ಲಿ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿರುವ ಮಾಹಿತಿ ಪ್ರಕಾರ, ಈ ಎಲ್ಲ ಸಂಸದರ ಒಟ್ಟು ಆಸ್ತಿ ಮೊತ್ತದಲ್ಲಿನ ಸರಾಸರಿ ಏರಿಕೆಯ ಪ್ರಮಾಣ ₹ 15.98 ಕೋಟಿ ಅಥವಾ ಶೇ 1,045 ರಷ್ಟಾಗಿದೆ.
ಜಿಗಜಿಣಗಿ ನಂತರದ ಸ್ಥಾನದಲ್ಲಿ ಮೆನಕಾ
ಆಸ್ತಿ ಗಳಿಕೆಯಲ್ಲಿ ಅಧಿಕ ಪ್ರಮಾಣದ ಏರಿಕೆ ಕಂಡಿರುವ ಸಂಸದರ ಪಟ್ಟಿಯಲ್ಲಿ ಕರ್ನಾಟಕದ ಜಿಗಜಿಣಗಿ ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶದ ಸುಲ್ತಾನ್‌ಪುರ ಸಂಸದೆ ಮೆನಕಾ ಗಾಂಧಿ ಇದ್ದಾರೆ. ಅವರ ಆಸ್ತಿ ಮೊತ್ತ ₹ 6.66 ಕೋಟಿಯಿಂದ ₹ 55.69 ಕೋಟಿಗೆ ಅಂದರೆ, ಶೇ 735 ರಷ್ಟು ಏರಿಕೆಯಾಗಿದೆ.
ಹರಿಯಾಣದ ಗುರುಗ್ರಾಮ ಸಂಸದ ರಾವ್ ಇಂದ್ರಜಿತ್ ಸಿಂಗ್ (ಬಿಜೆಪಿ) ಅವರ ಆಸ್ತಿ ಮೊತ್ತ ₹ 5.51 ಕೋಟಿಯಿಂದ ₹ 42.09 ಕೋಟಿಗೆ (ಶೇ 664) ಹೆಚ್ಚಾಗಿದೆ.