ಬೆಂಗಳೂರು, ಫೆಬ್ರವರಿ 23: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಕಳೆದ ಇಪ್ಪತ್ತು ವರ್ಷಗಳಲ್ಲಿ ಆಸ್ತಿ ಹೆಚ್ಚಿಸಿಕೊಂಡ ಸಂಸದರ ಪಟ್ಟಿ ಬಹಿರಂಗವಾಗಿದೆ. ವರದಿಯೊಂದರ ಪ್ರಕಾರ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೇನಕಾ ಗಾಂಧಿ ಸೇರಿದಂತೆ 2004ರಿಂದ ಪುನರಾಯ್ಕೆಗೊಳ್ಳುತ್ತಿರುವ 23 ಸಂಸದರ ಒಟ್ಟಾರೆ ಆಸ್ತಿ ಮೌಲ್ಯವು ರೂ. 35.18 ಕೋಟಿಯಿಂದ ರೂ. 402.79 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ ಕರ್ನಾಟಕ ಸಂಸದರ ಆಸ್ತಿ ಮೌಲ್ಯವೂ ಕೂಡ ಹೆಚ್ಚಾಗಿದೆ. ಕರ್ನಾಟಕದ ವಿಜಯಪುರ ಕ್ಷೇತ್ರದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಯವರ ಆಸ್ತಿ ಮೌಲ್ಯ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ. 9,098ರಷ್ಟು ಏರಿಕೆಯಾಗಿದೆ. 2004ರಲ್ಲಿ ರೂ. 54.8 ಲಕ್ಷದಷ್ಟಿದ್ದ ಇವರ ಆಸ್ತಿ ಮೌಲ್ಯವು 2019ರ ವೇಳೆಗೆ ರೂ. 50.41 ಕೋಟಿಯಾಗಿದೆ ಎಂದು ವರದಿ ತಿಳಿಸಿದೆ.
ಎಡಿಆರ್ಯ ವರದಿಯ ಪ್ರಕಾರ ಕರ್ನಾಟಕದ ಒಟ್ಟು ಆರು ಸಂಸದರ ಆಸ್ತಿ ಏರಿಕೆಯಾಗಿದೆ. ಈ ಸಂಸದರು 2004ರಿಂದ ಆಯ್ಕೆಯಾಗುತ್ತಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ.
ರಮೇಶ್ ಜಿಗಜಿಣಗಿ(ವಿಜಯಪುರ)- 54.8 ಲಕ್ಷದಷ್ಟಿದ್ದ ಆಸ್ತಿ ಮೌಲ್ಯ 50.41 ಕೋಟಿಗೆ ಏರಿಕೆಯಾಗಿದೆ.
ಡಿ.ವಿ.ಸದಾನಂದ ಗೌಡ (ಬೆಂಗಳೂರು ಉತ್ತರ) ಆಸ್ತಿ ಮೌಲ್ಯವು ರೂ. 46.39 ಲಕ್ಷದಿಂದ ರೂ. 20.93 ಕೋಟಿಗೆ ಏರಿಕೆಯಾಗಿದೆ
ಸಂಸದ ಜಿ.ಎಂ.ಸಿದ್ದೇಶ್ವರ್ (ದಾವಣಗೆರೆ) ಆಸ್ತಿ ಮೌಲ್ಯವು ರೂ. 5.02 ಕೋಟಿಯಿಂದ ರೂ. 38.01 ಕೋಟಿಗೆ ಏರಿಕೆಯಾಗಿದೆ.
ಕೇಂದ್ರ ಸಚಿವ ಪಹ್ಲಾದ್ ಜೋಶಿ (ಧಾರವಾಡ) ಆಸ್ತಿ ಮೌಲ್ಯ ರೂ. 77.60 ಲಕ್ಷದಿಂದ ರೂ. 11.13 ಕೋಟಿಗೆ ಏರಿಕೆಯಾಗಿದೆ.
ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ) ಆಸ್ತಿ ಮೌಲ್ಯವು ರೂ. 12.06 ಲಕ್ಷದಿಂದ ರೂ. 8.47 ಕೋಟಿಗೆ ಏರಿಕೆಯಾಗಿದೆ.
ಪಿ.ಸಿ.ಗದ್ದಿಗೌಡರ್ (ಬಾಗಲಕೋಟೆ) ಆಸ್ತಿ ಮೌಲ್ಯವು ರೂ. 53.75 ಲಕ್ಷದಿಂದ ರೂ. 4.39 ಕೋಟಿಗೆ ಏರಿಕೆಯಾಗಿದೆ
2004ರಿಂದ ಪುನರಾಯ್ಕೆಗೊಂಡಿರುವ 23 ಸಂಸದರ ಪೈಕಿ 17 ಸಂಸದರು ಬಿಜೆಪಿಗೆ ಸೇರಿದ್ದರೆ, ಮೂವರು ಸಂಸದರು ಕಾಂಗ್ರೆಸ್ ಪಕ್ಷಕ್ಕೆ, ಎಐಎಂಐಎಂ, ಶಿವಸೇನೆ ಹಾಗೂ ಬಿಜೆಡಿಗೆ ಸೇರಿದ ತಲಾ ಓರ್ವ ಸಂಸದರಿದ್ದಾರೆ. ಈ ಎಲ್ಲಾ ಸಂಸದರ ಸರಾಸರಿ ಆಸ್ತಿ ಮೌಲ್ಯವು 2004ರಲ್ಲಿ 1.52 ಕೋಟಿಯಾಗಿದ್ದರೆ, 2009ರಲ್ಲಿ 3.46 ಕೋಟಿಗೆ, 2014ರಲ್ಲಿ 9.85 ಕೋಟಿಗೆ ಹಾಗೂ 2019ರಲ್ಲಿ ರೂ. 17.51 ಕೋಟಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ಸಂಸದರ ಸರಾಸರಿ ಆಸ್ತಿ ಮೌಲ್ಯದ ಏರಿಕೆ ರೂ. 15.98 ಕೋಟಿ ಅಥವಾ ಶೇ. 1,045ರಷ್ಟಾಗಿದೆ ಎಂಬ ವಿಷಯವನ್ನು ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ.
ರಾಹುಲ್ ಗಾಂಧಿ ಆಸ್ತಿ ಏರಿಕೆ
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯ 2004 ರಲ್ಲಿ ರೂ. 55.38 ಲಕ್ಷದಿಂದ 2009 ರಲ್ಲಿ ರೂ. 2.32 ಕೋಟಿಗೆ, 2014 ರಲ್ಲಿ ರೂ. 9.4 ಕೋಟಿ ಮತ್ತು 2019ರಲ್ಲಿ ರೂ. 15.88 ಕೋಟಿಗೆ ಏರಿಕೆಯಾಗಿದೆ. ಕಳೆದ 15 ವರ್ಷಗಳಲ್ಲಿ ರಾಹುಲ್ ಗಾಂಧಿಯವರ ಆಸ್ತಿ ಮೌಲ್ಯದಲ್ಲಿ ಶೇ. 2,769ರಷ್ಟು ಏರಿಕೆ ಕಂಡಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆಸ್ತಿ ಮೌಲ್ಯ ರೂ. 85.68 ಲಕ್ಷದಿಂದ ರೂ.11.82 ಕೋಟಿಗೆ (ಶೇ.1,280ರಷ್ಟು) ಏರಿಕೆ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.