Skip to main content
Source
Prajavani
Author
PTI
Date
City
New Delhi

ನವದೆಹಲಿ: ಹೊಸದಾಗಿ ಆಯ್ಕೆಯಾದ 543 ಲೋಕಸಭಾ ಸದಸ್ಯರಲ್ಲಿ 251 (ಶೇ 46) ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅವರಲ್ಲಿ 27 ಮಂದಿ ಶಿಕ್ಷೆಗೆ ಒಳಗಾದವರು ಸೇರಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆ ಅಸೋಸಿಯೇಷನ್ ​​ಆಫ್ ಡೆಮಾಕ್ರಟಿಕ್ (ಎಡಿಆರ್) ವರದಿ ಮಾಡಿದೆ.

2019ರಲ್ಲಿ 233 (ಶೇ 43), 2014ರಲ್ಲಿ 185 (ಶೇ 34 ), 2009ರಲ್ಲಿ 162 (ಶೇ 30) ಮತ್ತು 2004ರಲ್ಲಿ 125 (ಶೇ 23 ) ಸಂಸದರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದವು.

ಎಡಿಆರ್ ಪ್ರಕಾರ, 2009ರಿಂದ ಘೋಷಿತ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಂಸದರ ಸಂಖ್ಯೆಯಲ್ಲಿ ಶೇ 55ರಷ್ಟು ಹೆಚ್ಚಳವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಗೆದ್ದ 251 ಅಭ್ಯರ್ಥಿಗಳ ಪೈಕಿ 170 (ಶೇ 31) ಮಂದಿ ಅತ್ಯಾಚಾರ, ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳು ಸೇರಿದಂತೆ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

2009ರಿಂದ ಘೋಷಿತ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿರುವ ಸಂಸದರ ಸಂಖ್ಯೆಯಲ್ಲಿ 124 ರಷ್ಟು ಹೆಚ್ಚಳವಾಗಿದೆ.

18ನೇ ಲೋಕಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯ 240 ಸಂಸದರಲ್ಲಿ 94 (ಶೇ 39) ಮಂದಿಯ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂದು ಎಡಿಆರ್ ತಿಳಿಸಿದೆ. ಕಾಂಗ್ರೆಸ್‌ನ 99 ಸಂಸದರಲ್ಲಿ ಶೇ 49 ಮಂದಿ, ಸಮಾಜವಾದಿ ಪಕ್ಷದ 37 ಅಭ್ಯರ್ಥಿಗಳಲ್ಲಿ 21 (ಶೇ 45), ಟಿಎಂಸಿಯ 29 ಮಂದಿಯಲ್ಲಿ 13 (ಶೇ 45), ಡಿಎಂಕೆಯ 22 ಮಂದಿಯಲ್ಲಿ 13 (ಶೇ 59 ), ಟಿಡಿಪಿಯ 16 ಮಂದಿಯಲ್ಲಿ 8 (ಶೇ 50), ಶಿವಸೇನೆಯ 7 ವಿಜೇತ ಅಭ್ಯರ್ಥಿಗಳಲ್ಲಿ ಐವರು (‌ಶೇ 71) ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಬಿಜೆಪಿ 63 (ಶೇ 26) ಅಭ್ಯರ್ಥಿಗಳು, ಕಾಂಗ್ರೆಸ್‌ನ 32 (ಶೇ 32), ಎಸ್‌ಪಿಯ 17 (ಶೇ 46) ಟಿಎಂಸಿಯ 7 (ಶೇ 24), ಡಿಎಂಕೆ 6 (ಶೇ 27), ಟಿಡಿಪಿ 5 (ಶೇ 31), ಶಿವಸೇನಾದ ನಾಲ್ವರು (ಶೇ 57) ಅಭ್ಯರ್ಥಿಗಳು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಎಡಿಆರ್ ವರದಿ ಮಾಡಿದೆ.