Skip to main content
Source
Kannada Oneindia
https://kannada.oneindia.com/news/india/assembly-by-elections-2023-16-candidates-with-criminal-cases-in-fray-11-face-serious-charges-say-311057.html
Author
Ravindra Gangal
Date
City
New Delhi

ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್‌ 5 ರಂದು ಉಪಚುನಾವಣೆ ನಡೆಯಲಿದೆ. ಈ ಏಳು ಕ್ಷೇತ್ರಗಳಿಗೆ ಸ್ಪರ್ಧಿಸಿರುವ 42 ಅಭ್ಯರ್ಥಿಗಳ ಪೈಕಿ ಒಟ್ಟು 16 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಈ ಪೈಕಿ 11 ಮಂದಿ ವಿರುದ್ಧ ಗಂಭೀರ ಆರೋಪಗಳಿವೆ ಎಂದು ಶುಕ್ರವಾರ ವರದಿಯೊಂದು ಬಹಿರಂಗಪಡಿಸಿದೆ.

ಸೆಪ್ಟೆಂಬರ್ 5 ರಂದು ನಡೆಯಲಿರುವ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಗಳ 43 ಅಭ್ಯರ್ಥಿಗಳ ಪೈಕಿ 42 ಅಭ್ಯರ್ಥಿಗಳ ಪ್ರಮಾಣ ಪತ್ರವನ್ನು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ನ್ಯೂ) ಜಂಟಿಯಾಗಿ ವಿಶ್ಲೇಷಿಸಿವೆ.

16 (ಶೇ. 38) ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೊಂದಿದ್ದಾರೆ ಎಂದು ವರದಿ ಹೇಳಿದೆ.

'ಈ ಪೈಕಿ 11 (ಶೇ. 26) ಮಂದಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ' ಎಂದು ವರದಿ ಹೇಳಿದೆ.

ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 42 ಅಭ್ಯರ್ಥಿಗಳಲ್ಲಿ 10 (ಶೇ. 24) ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಎಂದು ವರದಿ ಹೇಳಿದೆ. ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 1.08 ಕೋಟಿ ರೂಪಾಯಿಗಳಾಗಿವೆ. 19 ಅಭ್ಯರ್ಥಿಗಳು ಹೊಣೆಗಾರಿಕೆಗಳನ್ನು ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.

42 ಅಭ್ಯರ್ಥಿಗಳ ಪೈಕಿ ಐವರು ಮಹಿಳೆಯರಿದ್ದಾರೆ. ಈ ಪ್ರಮಾಣ ಶೇ.12ರಷ್ಟಿದೆ ಎಂದು ವರದಿ ಹೇಳಿದೆ. ಜಾರ್ಖಂಡ್‌ನ ದುಮ್ರಿ, ಕೇರಳದ ಪುತ್ತುಪ್ಪಲ್ಲಿ, ತ್ರಿಪುರಾದ ಬೊಕ್ಸಾನಗರ ಮತ್ತು ಧನಪುರ್, ಉತ್ತರ ಪ್ರದೇಶದ ಘೋಸಿ, ಉತ್ತರಾಖಂಡದ ಬಾಗೇಶ್ವರ್ ಮತ್ತು ಪಶ್ಚಿಮ ಬಂಗಾಳದ ಧುಪ್‌ಗುರಿ ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ.

ಘೋಸಿ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ 10 ಅಭ್ಯರ್ಥಿಗಳು ಇದ್ದಾರೆ. ಚುನಾವಣಾ ಕಣದಲ್ಲಿ, ಧೂಪ್ಗುರಿ ಮತ್ತು ಧುಮ್ರಿ ಮತ್ತು ಪುತ್ತುಪ್ಪಲ್ಲಿ ತಲಾ ಏಳು ಅಭ್ಯರ್ಥಿಗಳು, ಬೊಕ್ಸಾನಗರ ಮತ್ತು ಧನಪುರದಲ್ಲಿ ತಲಾ ಆರು, ಬಾಗೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ತಲಾ ಐದು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

'6 ರಾಜ್ಯಗಳ ಅಂದರೆ ಜಾರ್ಖಂಡ್, ಕೇರಳ, ತ್ರಿಪುರಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ 7 (ಏಳು) ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸಲು ನಿರ್ಧರಿಸಲಾಗಿದೆ' ಎಂದು ಚುನಾವಣಾ ಆಯೋಗ ಅಧಿಸೂಚನೆಯನ್ನು ಹೊರಡಿಸಿದೆ.

ಎಲ್ಲಾ ಮತಗಟ್ಟೆಗಳಲ್ಲಿ ಇವಿಎಂಎಸ್ ಮತ್ತು ವಿವಿಪ್ಯಾಟ್‌ಗಳನ್ನು ಬಳಸಲು ಆಯೋಗ ನಿರ್ಧರಿಸಿದೆ.

'ಸಾಕಷ್ಟು ಸಂಖ್ಯೆಯ ಇವಿಎಂಎಸ್ ಮತ್ತು ವಿವಿಪ್ಯಾಟ್‌ಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಇವುಗಳ ಸಹಾಯದಿಂದ ಚುನಾವಣೆ ಸುಗಮವಾಗಿ ನಡೆಯುವಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ' ಎಂದು ಆಯೋಗ ಮಾಹಿತಿ ನೀಡಿದೆ.


abc