Skip to main content
Source
Prajavani
https://www.prajavani.net/news/india-news/4001-mlas-own-assets-worth-rs-54545-cr-adr-karnatakas-mlas-rich-2422404
Author
ಪ್ರಜಾವಾಣಿ ವಾರ್ತೆ
Date
City
New Delhi

ದೇಶದ ವಿವಿಧ ಪಕ್ಷಗಳು ಮತ್ತು ಪಕ್ಷೇತರ 4,001 ಶಾಸಕರ ಬಳಿ ₹54,545 ಕೋಟಿ ಮೊತ್ತದ ಸಂಪತ್ತು ಇದೆ.  ಇದು ನಾಗಾಲೆಂಡ್‌, ಮಿಜೋರಾಮ್‌ ಮತ್ತು ಸಿಕ್ಕಿಂ ರಾಜ್ಯಗಳ ಒಟ್ಟಾರೆ ವಾರ್ಷಿಕ ಬಜೆಟ್‌ಗಿಂತಲೂ ಅಧಿಕ ಎಂದು ವರದಿಯೊಂದು ತಿಳಿಸಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ ಶಾಸಕರು ಸಲ್ಲಿಸಿದ್ದ ಅಫಿಡವಿಟ್‌ನಿಂದ ಮಾಹಿತಿಯನ್ನು ಸಂಗ್ರಹಿಸಿರುವುದಾಗಿ ‘ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್‌) ಮತ್ತು ‘ನ್ಯಾಷಲ್‌ ಎಲೆಕ್ಷನ್‌ ವಾಚ್‌’ (ನ್ಯೂ) ವರದಿ ಹೇಳಿದೆ.

ದೇಶದ 84 ಪಕ್ಷಗಳು ಮತ್ತು ಪಕ್ಷೇತರರು ಸೇರಿದಂತೆ 4,033 ಶಾಸಕರ, 4,001 ಅಫಿಡವಿಟ್‌ಗಳನ್ನು ಪರಿಶೀಲಿಸಲಾಗಿದ್ದು, ಪ್ರತಿಯೊಬ್ಬ ಶಾಸಕ ಸರಾಸರಿ ಆಸ್ತಿಯು ₹13.63 ಕೋಟಿ ಎಂದು ‘ಎಡಿಆರ್‌’ ಮತ್ತು ‘ನ್ಯೂ’ ತಿಳಿಸಿವೆ.

ದೇಶದ 4,001 ಶಾಸಕರ ಬಳಿ ₹54,545 ಸಂಪತ್ತು ಇದೆ. ಇದು ನಾಗಾಲೆಂಡ್‌, ಮಿಜೋರಾಮ್‌ ಮತ್ತು ಸಿಕ್ಕಿಂ ರಾಜ್ಯಗಳ 2023–24ರ ಒಟ್ಟಾರೆ ಬಜೆಟ್‌ಗಿಂತಲೂ ಅಧಿಕ. 2023–24ನೇ ಸಾಲಿನಲ್ಲಿ ನಾಗಾಲೆಂಡ್‌ ₹23,086 ಕೋಟಿ, ಮಿಜೋರಾಂ ‌₹14,210 ಕೋಟಿ, ಸಿಕ್ಕಿಂ ₹11,807 ಕೋಟಿ ಮೊತ್ತದ ಬಜೆಟ್‌ ಮಂಡಿಸಿವೆ. ಮೂರು ರಾಜ್ಯಗಳ ಒಟ್ಟಾರೆ ಬಜೆಟ್‌ ₹49,103 ಕೋಟಿ ಆಗಿತ್ತು.

‘ಬಿಜೆಪಿಯ 1,356 ಶಾಸಕರ ಸರಾಸರಿ ಆಸ್ತಿ ₹11.97 ಕೋಟಿ, ಕಾಂಗ್ರೆಸ್‌ 719 ಶಾಸಕರನ್ನು ಹೊಂದಿದ್ದು, ಪ್ರತಿಯೊಬ್ಬರ ಬಳಿ ಸರಾಸರಿ ₹21.97 ಕೋಟಿ ಆಸ್ತಿ ಇದೆ. ಟಿಎಂಸಿಯ 227 ಶಾಸಕರ ಸರಾಸರಿ ಆಸ್ತಿಯು ₹3.51 ಕೋಟಿ, ಎಎಪಿಯ 161 ಶಾಸಕರು ಸರಾಸರಿ ₹10.20 ಕೋಟಿ ಆಸ್ತಿ ಹೊಂದಿದ್ದಾರೆ. ವೈಎಸ್‌ಆರ್‌ನ 146 ಶಾಸಕರ ಸರಾಸರಿ ಆಸ್ತಿ  ₹23.14 ಕೋಟಿ ಎಂದು ವರದಿಯಲ್ಲಿ ಹೇಳಲಾಗಿದೆ.

ಬಿಜೆಪಿ ಶಾಸಕರ ಒಟ್ಟಾರೆ ಸಂಪತ್ತು ₹16,234 ಕೋಟಿ ಆಗಿದ್ದರೆ, ಕಾಂಗ್ರೆಸ್‌ ಶಾಸಕರದ್ದು ₹15,798 ಕೋಟಿ ಆಸ್ತಿ. ಅಂದರೆ ಎರಡೂ ಪಕ್ಷಗಳ ಶಾಸಕರ ಬಳಿಯೇ ₹ 32,032 ಆಸ್ತಿ ಇದ್ದು, ಇದು ಒಟ್ಟು ಶಾಸಕರ ₹54,545 ಕೋಟಿ ಸಂಪತ್ತಿನಲ್ಲಿ ಶೇ 58.73 ಪಾಲು ಹೊಂದಿದೆ.

ಕರ್ನಾಟಕದ ಶಾಸಕರೇ ಶ್ರೀಮಂತರು

ಕರ್ನಾಟಕದ 223 ಶಾಸಕರ ಒಟ್ಟಾರೆ ಸಂಪತ್ತು 14,359 ಕೋಟಿ ಆಗಿದ್ದು, ಇದು ಮಿಜೋರಾಮ್‌ ಮತ್ತು ಸಿಕ್ಕಿಂ ರಾಜ್ಯಗಳ 2023-24 ಸಾಲಿನ ಬಜೆಟ್‌ಗಿಂತಲೂ ಅಧಿಕವಾಗಿದೆ. ದೇಶದ ಒಟ್ಟು ಶಾಸಕರ ಒಟ್ಟಾರೆ ಸಂಪತ್ತಿನಲ್ಲಿ ಶೇ 26ರಷ್ಟಾಗುತ್ತದೆ. ಅಷ್ಟೇ ಅಲ್ಲದೇ, ರಾಜಸ್ಥಾನ, ಪಂಜಾಬ್‌, ಅರುಣಾಚಲ ಪ್ರದೇಶ, ಬಿಹಾರ, ದೆಹಲಿ, ಛತ್ತೀಸಗಢ, ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ಗೋವಾ, ಮೇಘಾಲಯ,  ಒಡಿಶಾ, ಅಸ್ಸಾಂ, ನಾಗಾಲೆಂಡ್‌, ಉತ್ತರಾಖಂಡ, ಕೇರಳ, ಪುದುಚೇರಿ, ಜಾರ್ಖಂಡ್‌, ಸಿಕ್ಕಿಂ, ಮಣಿಪುರ, ಮಿಜೋರಾಮ್‌ ಮತ್ತು ತ್ರಿಪುರ ರಾಜ್ಯಗಳ ಶಾಸಕರ ಒಟ್ಟಾರೆ ಅಸ್ತಿಗಿಂತಲೂ ಹೆಚ್ಚು. ಈ ರಾಜ್ಯಗಳ ಎಲ್ಲ ಶಾಸಕರ ಒಟ್ಟು ಆಸ್ತಿ ₹13,976 ಎಂದು ‘ಎಡಿಆರ್‌’ ಮತ್ತು ‘ನ್ಯೂ’ ಹೇಳಿವೆ.


abc